ಶಂಕರ್‍ದಯಾಳ ಶರ್ಮಾ
1918-99. ಭಾರತದ 9ನೆಯ ರಾಷ್ಟ್ರಪತಿ (1992-97). ಡಾ. ಶಂಕರದಯಾಳ ಶರ್ಮಾ 1918 ಆಗಸ್ಟ್ 19ರಂದು ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಜನಿಸಿದರು. ಇವರ ತಂದೆ ಕುಶೀಲಾಲ್, ತಾಯಿ ಸುಭದ್ರಾ. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಎಂ.ಎ., ಎಲ್.ಎಲ್.ಎಮ್. ಪದವಿಗಳನ್ನು, ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಕಾನ್‍ಸ್ಟಿಟ್ಯೂಷನಲ್ ಲಾ ವಿಷಯ ಕುರಿತು ಪಿಎಚ್.ಡಿ. ಪದವಿಯನ್ನು ಪಡೆದರು. ಲಿಂಕನ್ಸ್‍ಇನ್‍ನ ಬಾರ್-ಅಟ್-ಲಾ ಹಾಗೂ ಲಂಡನ್‍ನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಡಿಪ್ಲೊಮ ಪದವಿ ಪಡೆದರು. ಅನಂತರ ಇವರು ಲಖನೌ ವಿಶ್ವವಿದ್ಯಾಲಯ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ಕಾನೂನು ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು(1946-47). ಇವರಿಗೆ ಸಂಸ್ಕøತ, ಹಿಂದಿ, ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ಆಳವಾದ ಪಾಂಡಿತ್ಯವಿತ್ತು. 

	ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ನೆಹರೂ ಅವರ ಸಂಪರ್ಕಕ್ಕೆ ಬಂದ ಶಂಕರದಯಾಳ ಶರ್ಮಾ, ಮೋತಿಲಾಲ್ ನೆಹರೂ ಅವರ ಭಾಷಣಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದರು. ದೇಶೀಯ ಸಂಸ್ಥಾನವಾಗಿದ್ದ ಭೋಪಾಲ್‍ನಲ್ಲಿ ನಡೆಯುತ್ತಿದ್ದ ಭೂಮಾಲೀಕರ ವಿರುದ್ಧದ ಚಳವಳಿಯಲ್ಲಿ ಪಾಲ್ಗೊಂಡರು. 1950ರಲ್ಲಿ ಭೋಪಾಲ್ ಮುಖ್ಯಮಂತ್ರಿಯಾದರು. ಮುಂದೆ ಮಧ್ಯಪ್ರದೇಶ ರಾಜ್ಯ ರೂಪುಗೊಂಡು ಸರ್ಕಾರ ರಚನೆಯಾದಾಗ ಇವರು ವಿವಿಧ ಖಾತೆಗಳಲ್ಲಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ(1952-56) ಸೇವೆ ಸಲ್ಲಿಸಿದರು.

	ಮೂರು ದಶಕಗಳಿಗೂ ಹೆಚ್ಚುಕಾಲ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪಕ್ಷದ ಸಂಘಟನೆಗೆ ದುಡಿದರು. 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಇಂದಿರಾ ಕಾಂಗ್ರೆಸ್‍ನಲ್ಲೇ ಉಳಿದರು. ಇಂದಿರಾಗಾಂಧೀಯವರು ಇವರನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರನ್ನಾಗಿ ನೇಮಿಸಿದರು(1972-74).

	1984ರ ವೇಳೆಗೆ ಸಕ್ರಿಯ ರಾಜಕಾರಣದಿಂದ ದೂರಸರಿದ ಇವರು ಆಂಧ್ರಪ್ರದೇಶ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರಾಗಿ ಸೇವೆಸಲ್ಲಿಸಿದರು. ಅನಂತರ ಭಾರತದ 7ನೆಯ ಉಪರಾಷ್ಟ್ರಪತಿಯಾದರು(1987 ಸೆಪ್ಟಂಬರ್ 30). ಐದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಸೇವೆಸಲ್ಲಿಸಿದ ಇವರು ಆರ್. ವೆಂಕಟರಾಮನ್ ಅವರ ನಿವೃತ್ತಿಯ ಅನಂತರ 1992 ಜುಲೈ 25ರಂದು ಭಾರತದ 9ನೆಯ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರಾವಧಿಯಲ್ಲಿ ಕೇಂದ್ರ ರಾಜಕಾರಣದಲ್ಲಿ ಹಲವಾರು ಬದಲಾವಣೆಗಳು ಆದವು. ಮೂವರು ಪ್ರಧಾನಿಗಳು ಇವರ ಅವಧಿಯಲ್ಲಿ ಆಡಳಿತ ನಡೆಸಿದರು. 1996ರ ಲೋಕಸಭಾ ಚುನಾವಣೆಯಲ್ಲಿ ನಾಯಕ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು. ವಾಜಪೇಯಿಯವರು ಸರ್ಕಾರ ರಚಿಸಿದರೂ ಹದಿಮೂರು ದಿನಗಳಲ್ಲಿ ಸರ್ಕಾರ ಬಿದ್ದುಹೋಯಿತು. ಅನಂತರ ಕಾಂಗ್ರೆಸ್(ಐ) ಪಕ್ಷದ ಬೆಂಬಲದಿಂದ ಮಿತ್ರಕೂಟಗಳ ಸಂಯುಕ್ತರಂಗ ಎಚ್.ಡಿ.ದೇವೇಗೌಡರ ನಾಯಕತ್ವದಲ್ಲಿ ಸರ್ಕಾರ ರಚಿಸಿತು. ಆದರೆ ಹತ್ತು ತಿಂಗಳಲ್ಲೇ ಕಾಂಗ್ರೆಸ್ ಬೆಂಬಲ ಹಿಂತೆಗೆದು ಕೊಂಡಿದ್ದರಿಂದ ಪ್ರಧಾನಿ ದೇವೇಗೌಡರು ರಾಜೀನಾಮೆ ನೀಡಬೇಕಾಯಿತು. ಅನಂತರ ಐ.ಕೆ. ಗುಜ್ರಾಲ್ ಕಾಂಗ್ರೆಸ್ ಬೆಂಬಲದೊಡನೆ 1997 ಏಪ್ರಿಲ್‍ನಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇವರು ತಮ್ಮ ಹತ್ತು ವರ್ಷಗಳ ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿ ಅಧಿಕಾರಾವಧಿ ಯಲ್ಲಿ ಏಳು ಜನ ಪ್ರಧಾನಮಂತ್ರಿಗಳೊಂದಿಗೆ ಆಡಳಿತ ನಡೆಸಿದ್ದು ಒಂದು ದಾಖಲೆ ಎನ್ನಬಹುದು.

	ಹಲವಾರು ವಿಶ್ವವಿದ್ಯಾಲಯಗಳ, ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿಂದ ಪಂಡಿತ ಗೌರವ ಪಡೆದ ಡಾ. ಶಂಕರದಯಾಳಶರ್ಮಾ ಅವರಿಗೆ ಶೃಂಗೇರಿ ಶಂಕರಾಚಾರ್ಯ ಸ್ವಾಮೀಜಿ `ರಾಷ್ಟ್ರ ರತ್ನ ಗೌರವ ನೀಡಿ ಪುರಸ್ಕರಿಸಿದರು. ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕರಿಂದ `ಧರ್ಮ ರತ್ನಾಕರ ಬಿರುದಾಂಕಿತರು ಇವರು. ಸ್ವತಃ ವಿದ್ವಾಂಸರಾದ ಇವರು ಹಿಂದಿ ಮತ್ತು ಇಂಗ್ಲಿಷ್‍ಗಳಲ್ಲಿ ಸಂಸ್ಕøತಿ, ಲೋಕನೀತಿ, ಕಾನೂನು, ಶಿಕ್ಷಣ ಕುರಿತು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.

	ಪರಿಶುದ್ಧ ಸಾರ್ವಜನಿಕ ಜೀವನ ನಡೆಸಿದ ಇವರು ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಖ್ಯಾತರು. ಡಾ. ಶಂಕರದಯಾಳಶರ್ಮಾ 1999ರಲ್ಲಿ ನಿಧನ ಹೊಂದಿದರು.		
			(ಎಮ್.ಎಸ್.ಕೆ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ